ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷ ವೈಭವ - ಹದಿನಾರರ ಶೋಭೆ , ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಬೆಳುವಾಯಿ

ಲೇಖಕರು : ಉದಯವಾಣಿ
ಶುಕ್ರವಾರ, ಜೂನ್ 21 , 2013
ಮನಮೋಹಕ, ಅದ್ಭುತ ರಂಗಕ್ರಿಯೆ ಹಾಗೂ ಪ್ರದರ್ಶನ ವಿಧಾನದ ಭವ್ಯತೆಯ ಮೂಲಕ ನೋಡುಗನನ್ನು ನಿಬ್ಬೆರಗಾಗಿಸುವ ಆ ಮೂಲಕ ಸನಾತನ ಸಂದೇಶಗಳನ್ನು ಕಥಾ ರೂಪದಲ್ಲಿ ಸಾದರಪಡಿಸುವ ರಾತ್ರಿಯನ್ನು ಬೆಳಗುವ ಕಲೆ ಯಕ್ಷಗಾನ.



ಯಕ್ಷಗಾನ ಸಂಬಂಧಿಯಾಗಿ ನೀಡಲಾಗುವ, ನಿರೂಪಿಸ ಲಾಗುವ, ಬರೆಯಲಾಗುವ ಎಲ್ಲಾ ವ್ಯಾಖ್ಯೆಗಳೂ ಕಲಾ ಸೊಬಗಿನ ಪೂರ್ಣ ಆಸ್ವಾದನೆಗೆ ಅಥವಾ ಸಮಗ್ರ ಪ್ರಸ್ತುತಿಗೆ ಕಡಿಮೆ ಎಂದೇ ಅನ್ನಿಸುವುದು ಈ ಕಲೆಯ ಭ್ರಾಮಕಗುಣ ಮತ್ತು ಪರಿಪೂರ್ಣತೆಯ ಸ್ವರೂಪದಿಂದ. ಭೌಮದಲ್ಲಿ ಕಲೆಯ ವಿಕಸನ ವಿಧಾನವೇ ವಿಲಕ್ಷಣ. ಈ ಸಾಮರ್ಥ್ಯದಿಂದಲೇ ದಿವ್ಯವನ್ನು ಸೃಷ್ಟಿಸುವ ಸಾಧ್ಯತೆ, ಮೌಲ್ಯ ಬೋಧನೆ, ನೀತಿ ಪಾಠಗಳೆಲ್ಲವೂ ಸಾಧ್ಯ. ಇದು ಆರಾಧನಾ ರಂಗ ಕಲೆ. ಕಂಡು ಆನಂದಿಸಬಹುದಾದ್ದರಿಂದ ಇದು ಪ್ರದರ್ಶನ ಕಲೆ.

ಮಣ್ಣಿನ ಕಲೆಯಾಗಿ ಕರಾವಳಿಯ ಜನರ ಬದುಕಿನ ಅವಿಭಾಜ್ಯ ಅಂಗವಾಗಿರುವ ದೈವ-ನಾಗರಂತೆ, ದೇವರು ಗಳಂತೆ ಯಕ್ಷಗಾನವೂ ಸರ್ವಮಾನ್ಯ. ಹೀಗೆ ಯಕ್ಷಗಾನ ವನ್ನು ಪ್ರೀತಿ - ಗೌರವದಿಂದ ಕಂಡ ಮೂಡಬಿದಿರೆ ಸಮೀಪದ ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಕಳೆದ 15 ವರ್ಷ ಕಲಾಸಕ್ತರಿಗೆ ಒದಗಿಸಿದ್ದು ವೈವಿಧ್ಯಮಯ ಚಿಂತನೆ - ಆಶಯಗಳುಳ್ಳ ಕಾರ್ಯಕ್ರಮ ವೈವಿಧ್ಯ. ನಿರ್ದಿಷ್ಟ ಅವಧಿಯ, ವಿವಿಧ ಶಿರೋನಾಮೆಗಳ ಪ್ರದರ್ಶನ ಏರ್ಪಡಿಸಿ ಸೈ ಅನ್ನಿಸಿ ಕೊಂಡ ಯಕ್ಷದೇವ ಮಿತ್ರರು ಇದೀಗ 16ನೇ ವತ್ಸರದಲ್ಲಿ "ಯಕ್ಷ ವೈಭವ - 2013'ನ್ನು ಸಾದರಪಡಿಸಲು ಸಿದ್ಧರಾಗಿದ್ದಾರೆ. ಈ ಐದು ದಿನಗಳ ಕಾರ್ಯಕ್ರಮ ಮೂಡಬಿದಿರೆಯ ಪದ್ಮಾವತಿ ಕಲಾಮಂದಿರದಲ್ಲಿ ಜೂ. 26ರಿಂದ ಪ್ರತಿದಿನ ಸಂಜೆ ಸಂಪನ್ನ ಗೊಳ್ಳಲಿದೆ. "ಹದಿನಾರರ ಶೋಭೆ'ಯಾಗಿ ಈ ಬಾರಿಯ ಕಲ್ಪನೆ - ಅನುಸಂಧಾನ ಅನಾವರಣಗೊಳ್ಳಲಿದೆ.

ಕಲಾವಿದರು, ಚಿಂತಕರು, ವಿದ್ವಾಂಸರು, ಕಲಾಪೋಷಕರು, ಪ್ರೋತ್ಸಾಹಕರು ಸದಸ್ಯರಾಗಿರುವ ಯಕ್ಷದೇವ ಮಿತ್ರಕಲಾ ಮಂಡಳಿ ಯಕ್ಷಗಾನ ರಂಗವನ್ನು ಬಹಳ ಗೌರವದಿಂದ ಸ್ವೀಕರಿ ಸಿದೆ. ಕಲಾಸೊಬಗಿಗೆ, ಸಂಪ್ರದಾಯಕ್ಕೆ, ಶಾಸ್ತ್ರೀಯ ಚೌಕಟ್ಟಿಗೆ, ಗಾಂಭೀರ್ಯಕ್ಕೆ, ವೈಭವಕ್ಕೆ ತೊಡಕಾಗದಂತೆ ಯಥಾಪೂರ್ವ ಕಲಾರೇಖೆಯ ಒಳಗೆ ಕಲೆಯನ್ನು ಪ್ರದರ್ಶಿಸಿದ್ದು ಯಕ್ಷದೇವ ಮಿತ್ರರ ಹೆಚ್ಚುಗಾರಿಕೆ. ಸಮಗ್ರ ಕಲಾ ಪ್ರಕಾರದ ಒಂದೊಂದು ವಿಭಾಗಗಳನ್ನು ಬೇರೆ ಬೇರೆ ಕಲ್ಪನೆಗಳಲ್ಲಿ ಗಮನಿಸಿ ಪ್ರಾಯೋಗಿಕ ಪ್ರದರ್ಶನ ನೀಡುತ್ತಾ ಬಂದಿರುವುದು ಸಂಘಟನೆಯ ಅಧ್ಯಯನಶೀಲತೆಯನ್ನು ದೃಢೀಕರಿಸುತ್ತದೆ.

ಹಿಮ್ಮೇಳ, ಮುಮ್ಮೇಳಗಳೊಂದಿಗೆ ನಿರ್ದಿಷ್ಟ ಚೌಕಟ್ಟಿನೊಳಗೆ ಅರಳುವ, ವಿಜೃಂಭಿಸುವ ಯಕ್ಷಗಾನದ ಶೈಲಿ ಭಿನ್ನವಾದುದು. ಹಿಮ್ಮೇಳ ಗಾಂಭೀರ್ಯ, ಭಾವ ಸೃಷ್ಟಿ, ಕಥಾನಡೆಗೆ ನಿರ್ದೇಶನ, ಒಟ್ಟು ರಂಗ ಕ್ರಿಯೆಯ ಯಶಸ್ವಿ ನಿರ್ವಹಣೆಯ ಜವಾಬ್ದಾರಿ ಯೊಂದಿಗೆ ಭಾಗವತಿಕೆಯ ಗಾಯನ ಮಾಧುರ್ಯ, ಮದ್ದಳೆಯ ನುಡಿತ ವಿಧಾನ, ಚೆಂಡೆಯ ವಾದನ ಕ್ರಮಗಳು ಮುಖ್ಯ ಅಂಶಗಳು. ಇವುಗಳನ್ನು ಭಿನ್ನ ಕ್ರಮದಲ್ಲಿ ಬಳಸಿಕೊಂಡು ನೀಡಿರುವ ಕಾರ್ಯಕ್ರಮಗಳು ಯಕ್ಷಗಾನ ಹಿಮ್ಮೇಳದ ಕುರಿತು ನಡೆಸಿದ ಅಧ್ಯಯನವೇ ಆಗಿತ್ತು. ಇದು 15 ವರ್ಷಗಳಲ್ಲಿ ಕನಿಷ್ಠ 10 ಶೈಲಿಗಳಲ್ಲಿ ಪ್ರದರ್ಶನಗೊಂಡಿತ್ತು.

ವೇಷ ವೈವಿಧ್ಯದ ಕಲ್ಪನೆ, ರಂಗಿನ ಮಾಯಾಲೋಕದ ಸೃಷ್ಟಿ, ಆಶುವೈಭವ ಇವೆಲ್ಲವೂ ಯಕ್ಷಗಾನದ ಪ್ರಮುಖ ಅಂಗಗಳು. ಇವುಗಳನ್ನು ಮಾತ್ರ ಅಭಿವ್ಯಕ್ತಿಗೆ ಸ್ವೀಕರಿಸಿದ ಪ್ರಯೋಗಗಳೂ ನಡೆದಿವೆ. ನಾಟ್ಯದ ಸಂಭ್ರಮವನ್ನು ಮತ್ತು ನೃತ್ಯ ಹಾಗೂ ಅಭಿನಯಗಳ ಹಾಸುಹೊಕ್ಕನ್ನು ಪ್ರಸ್ತುತ ಪಡಿಸುವ ಪ್ರಯತ್ನಗಳು ಸ್ತುತ್ಯರ್ಹವೆನಿಸಿವೆ. ಸಮಗ್ರ ರಂಗ ಕ್ರಿಯೆಯನ್ನು ಬೇರೆಬೇರೆಯಾಗಿ ವಿಂಗಡಿಸಿ ಪ್ರದರ್ಶನಕ್ಕೆ ಸಿದ್ಧಪಡಿಸಿ ಪ್ರದರ್ಶಿ ಸಿದ ಕೀರ್ತಿ ಇವರಿಗಿದೆ. ಹೀಗೆ ಪ್ರಯೋಗ ಗಳಿಂದ ಸಂಸ್ಥೆ ಹೆಸರಾಗಿದೆ. ಇದೆಲ್ಲ ಪ್ರಯೋಗ. ಶಾಸ್ತ್ರೀಯತೆಗೆ ಬದ್ಧವಾಗಿರದಿದ್ದರೆ, ಸ್ವೀಕಾರಾರ್ಹವಲ್ಲವಾಗಿ ದ್ದರೂ ಆಕ್ಷೇಪವಿಲ್ಲ. ಕಲೆ, ವಿದ್ವಾಂಸರ ಅಭಿಪ್ರಾಯಕ್ಕೆ ಶರಣು ಎನ್ನುವ ಯಕ್ಷದೇವ ಮಿತ್ರರು ಇದು ಕೇವಲ ಪ್ರಯೋಗ, ರಂಗ ಸಾಧ್ಯತೆಯ ಸಂಯೋಜನೆ, ಅಧ್ಯಯನ ಮಾತ್ರ ಎನ್ನುತ್ತಾರೆ.

ಯಕ್ಷಗಾನ ಹಿಮ್ಮೇಳ ಸ್ಪರ್ಧೆ, ತಾಳಮದ್ದಳೆ ಸ್ಪರ್ಧೆಗಳನ್ನು ಹವ್ಯಾಸಿ ಕಲಾವಿದರಿಗಾಗಿ ಏರ್ಪಡಿಸಲಾಗಿತ್ತು. 37 ಮನೆಗಳಲ್ಲಿ ಚಾವಡಿ ಕೂಟ ಏರ್ಪಡಿಸಿ ಕೆಲವು ಕಲಾವಿದರು ಸಿದ್ಧರಾಗಿದ್ದಾರೆ. ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ತರಬೇತಿ ಮತ್ತು ಪ್ರದರ್ಶನಕ್ಕೆ ಮಾರ್ಗದರ್ಶನ, 26 ಮಂದಿ ಪ್ರಸಿದ್ಧ ಕಲಾವಿದರಿಗೆ ಗೌರವಾರ್ಪಣೆ ಮಾಡಲಾಗಿದೆ. ಶತಾವಧಾನಿ ಆರ್‌. ಗಣೇಶ್‌ ಅವರಿಂದ ದಶಾವಧಾನ ನಡೆಸಲಾಗಿದೆ. ಯಕ್ಷಲೋಕ ದರ್ಶನ, ಯಕ್ಷಾಂತ ರಂಗ ಮುಂತಾದ ಹತ್ತಾರು ಶೀರ್ಷಿಕೆಗಳು ಪ್ರತಿ ವರ್ಷ ಜನರನ್ನು, ಕಲಾಸಕ್ತರನ್ನು ಆಕರ್ಷಿಸುತ್ತಿದ್ದವು. ಚಿಂತಕ, ವಿಮರ್ಶಕರಿಗೆ ಅವಕಾಶವಾಗುತ್ತಿದ್ದವು. ತಿಟ್ಟುದ್ವಯಗಳ ಪ್ರಸಿದ್ಧ ಕಲಾವಿದರು ಮೂಡಬಿದಿರೆಗೆ ಬಂದಿದ್ದಾರೆ. ಅವರವರ ಪರಿಶ್ರಮಗಳನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಭಿನ್ನ ಆಲೋಚನೆಗಳ ಮೂಲಕ ಅವಕಾಶ ಕೊಟ್ಟಿದ್ದೇವೆ ಎಂಬುದು ಧನ್ಯತೆ ಎನ್ನುತ್ತಾರೆ ಸ್ವತಃ ಹಿಮ್ಮೇಳ ಮುಮ್ಮೇಳ ಕಲಾವಿದರಾಗಿ, ಸಂಘಟಕರಾಗಿರುವ ದೇವಾನಂದ ಭಟ್‌. ಜತೆಗೆ ವಿವರಣೆ ನೀಡುತ್ತಿರುತ್ತಾರೆ ಮಹಾವೀರ ಪಾಂಡಿ. ಈ ಸಂಸ್ಥೆಗೆ ಬೆಂಬಲವಾಗಿ ನಿಂತವರು ಉದ್ಯಮಿ, ಗೌರವಾಧ್ಯಕ್ಷ ಶ್ರೀಪತಿ ಭಟ್‌ ಮತ್ತು ಯಕ್ಷ ದೇವ ಮಿತ್ರ ಕಲಾ ಮಂಡಳಿಯ ಸರ್ವ ಸದಸ್ಯರು, ಕಲಾ ಪೋಷಕರು ಸಹಕರಿಸುತ್ತಿದ್ದಾರೆ.

ಪ್ರಪ್ರಥಮ ಯಕ್ಷಗಾನ ಸಮ್ಮೇಳನ ಎಲ್ಲಿ?

ಯಕ್ಷಗಾನ ಕಲೆಗೆ ಸಂಬಂಧಿಸಿದ ಮೊದಲ ಸಮ್ಮೇಳನ ಎಲ್ಲಿ ಆಯಿತು ಎಂಬ ಬಗೆಗೆ ಮಾಹಿತಿ ಅಗತ್ಯವಿದೆ. ಇತ್ತೀಚೆಗೆ ಹಲವು ಸಂಗತಿಗಳಲ್ಲಿ ಬಹಳ ಈಚೆಗಿನ ಘಟನೆಗಳನ್ನು ಆಧರಿಸಿ ಅದೇ ಪ್ರಥಮ ಎಂಬಂತೆ ಬರೆಯುತ್ತಿದ್ದಾರೆ. ಇದರಿಂದ ಈಗಾಗಲೇ ಕೆಲವು ತಪ್ಪು ಮಾಹಿತಿಗಳು ಪ್ರಸಾರಗೊಂಡಿವೆ. 1940-50ರ ಮಧ್ಯೆ ಕುಮಟಾದಲ್ಲಿ, 1935ರಲ್ಲಿ ಶ್ರೀಕ್ಷೇತ್ರ ಹೊರನಾಡಿನಲ್ಲಿ, 1950 (?)ರಲ್ಲಿ ಶಿರಸಿಯಲ್ಲಿ ಯಕ್ಷಗಾನ ಸಮ್ಮೇಳನಗಳು ಜರಗಿವೆ ಎಂದು ಅಲ್ಲಲ್ಲಿ ಮಾಹಿತಿ ದೊರೆಯುತ್ತದೆ. ಈ ಸರಣಿಯಲ್ಲಿ ಮೊದಲ ಸಮ್ಮೇಳನ/ ಪರಿಷತ್ತು ಯಾವುದೆಂದು ಬಲ್ಲವರು ಬರೆದು ತಿಳಿಸಿದರೆ ಅನುಕೂಲ.


ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ